Wednesday, 14 October 2015

ಸೋತ ಬಾಯಿಯ ದುರ್ವಾಸ ನಾತ


ಮನುಷ್ಯನಲ್ಲಿ ಅಡಗಿರುವ ವಾಸನೆಯನ್ನು ಪ್ರಕಟಪಡಿಸುವ ಪ್ರಮುಖ ಅಂಗಗಳಲ್ಲಿ ಬಾಯಿಯು ಪ್ರಮುಖವಾದುದು. “ಯಾವ ವಾಸನೆಯನ್ನಾದರೂ ಸಹಿಸಬಹುದು; ಈ ಬಾಯಿಯ ವಾಸನೆಯನ್ನಲ್ಲ” ಎಂಬುದು ಎಲ್ಲರ ಅನುಭವ. ನೆಪೋಲಿಯನ್‌ನ ಹೆಂಡತಿಯು ಗಂಡನ ಬೆವರಿನ ವಾಸನೆಯನ್ನು ಇಷ್ಟ ಪಡುತ್ತಿದ್ದಳಂತೆ. ಆದರೆ ಅಮಲಿನಲ್ಲಿರುವಾಗಲೂ ಬಾಯಿಯ ದುರ್ವಾಸನೆಯನ್ನು ಯಾರೂ ಇಷ್ಟ ಪಡಲಾರರು. ಬಾಯಿಯ ವಾಸನೆ ಅಥವಾ ದುರ್ಗಂಧವು ಹಲವು ಬಗೆಯದಾಗಿರಬಹುದು; ಅದಕ್ಕೆ ಹಲವು ಕಾರಣಗಳಿರಬಹುದು. ಆತ್ಮೀಯರಾಗಿ ಬಳಿಗೆ ಬಂದವರು ಹಾರಿ ದೂರ ನಿಲ್ಲುವಂತೆ ಮಾಡಬಲ್ಲ ಈ ಬಾಯಿಯ ದುರ್ವಾಸನೆಯ ಕಾರಣ ಮತ್ತು ಪರಿಹಾರೋಪಾಯಗಳನ್ನು ಎಲ್ಲರೂ ತಿಳಿದಿರುವುದು ಅವಶ್ಯಕ.


ಅಯ್ಯೋ....ವಾಸನೆ !!!

ಜಗತ್ತಿನಲ್ಲಿ ೯೦ ಮಿಲಿಯಕ್ಕೂ ಅಧಿಕ ಜನರು ಬಾಯಿಯ ದುರ್ವಾಸನೆ(Chronic halitosis) ಯಿಂದ ಬಳಲುತ್ತಾರೆ. ಹೆಚ್ಚಾಗಿ ನಿಜ ಹಾಗೂ ನಾಲಗೆಯಿಂದ ಹುಟ್ಟಿಕೊಳ್ಳುವ ಸಮಸ್ಯೆ ಇದು. ಈ ದುರ್ವಾಸನೆಯು ಬಾಯಿಯಲ್ಲಿನ ಆಹಾರ ಪದಾರ್ಥದ ಮೇಲೆ ರೋಗಾಣು(Bacteria)ಗಳ ಕೆಲಸದಿಂದಾಗಿ ಉಂಟಾಗುವ ಕೊಳೆತದಿಂದ ಹಾಗೂ ಬಾಯಿಯ ಸ್ವಚ್ಛತೆಯ ನಿರ್ಲಕ್ಶ್ಯದಿಂದ(Poor oral hygiene) ಉಂಟಾಗುವುದು. ಬಾಯಿಯಲ್ಲಿ ಹೀಗೆ ಆಹಾರದ ಕೊಳೆತದಿಂದ ಗಂಧಕಾಮ್ಲ(Sulfur compounds) ಉಂಟಾಗಿ ಅದರಿಂದಾಗಿ ದುರ್ವಾಸನೆ ಕಾಣಿಸಿಕೊಳ್ಳುತ್ತದೆ.

ವಾಸನೆಗೆ ಬಹುಮುಖ :
ಮುಖ್ಯವಾಗಿ ಬಾಯಿಯ ನೈರ್ಮಲ್ಯದ ಕೊರತೆ ಹಾಗೂ ಕೆಲವೊಮ್ಮೆ ನಿಜದ ರೋಗದಿಂದಲೂ ಬಾಯಿಯು ವಾಸನೆಯೆಂಬ ರೋಗಕ್ಕೆ ತುತ್ತಾಗುತ್ತದೆ. ಆಗ ಹಲ್ಲು, ನಾಲಗೆ, ಒಳಕೆನ್ನೆ ಹಾಗೂ ತಾಲುಗಳನ್ನು ಸ್ವಚ್ಛಗೊಳಿಸುವುದರಿಂದ ಆಹಾರಪದಾರ್ಥ ಮತ್ತು ಬ್ಯಾಕ್ಟೀರಿಯಾಗಳು ತೊಲಗಿ ಸಹಜಸ್ಥಿತಿಗೆ ಬಂದು ವಾಸನೆ ದೂರಾಗುತ್ತದೆ.
ಕೆಲವು ಶಾರೀರಿಕ ಸಮಸ್ಯೆಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಸಿಹಿಮೂತ್ರ, ಮೂತ್ರಪಿಂಡದ ವೈಫಲ್ಯ, ಯಕೃತ್ತಿನ ದೋಷಗಳಿಂದ ಸದಾ ಬಾಯಿ ಒಣಗಿದಂತಾಗಿ ಕೆಟ್ಟ ವಾಸನೆ ಹುಟ್ಟಬಹುದು. ತಂಬಾಕು ಸೇವನೆಯು ಕೂಡ ಒಂದು ಕಾರಣ. ಕ್ಯಾನ್ಸರ್ ರೋಗಿಗಳಿಗೆ ಕೊಡುವ ಕ್ಷ-ಕಿರಣ ಚಿಕಿತ್ಸೆಯಿಂದ ಬಾಯಿ ಒಣಗಿ ದುರ್ವಾಸನೆ ಹೊಮ್ಮಬಹುದು. ಮಾನಸಿಕ ಒತ್ತಡ, ಪಥ್ಯ(dieting), ಗೊರಕೆ, ಏರುಪ್ರಾಯ ಹಾಗೂ ಹಾರ್ಮೋನ್ ಅಸಮತೋಲನಗಳೂ ಶ್ವಾಸದ ಮೇಲೆ ಪರಿಣಾಮ ಬೀರಿ ಬಾಯ ದುರ್ವಾಸನೆಯು ಅನುಭವಕ್ಕೆ ಬರಬಹುದು. ಅತಿಮಸಾಲೆಭರಿತ ನೀರುಳ್ಳಿ, ಬೆಳ್ಳುಳ್ಳಿ ಮಿಶ್ರಿತ ಆಹಾರ, ಮಿತಿಮೀರಿದ ಕಾಫಿ ಸೇವನೆಯಿಂದಲೂ ಶ್ವಾಸದಲ್ಲಿ ೭೨ ಘಂಟೆಗಳವರೆಗೂ ಅಸಹಜ ವಾಸನೆಯು ಉಳಿದುಕೊಳ್ಳುತ್ತದೆ. ನೀರುಳ್ಳಿಯು ಪಚನಗೊಂಡ ಬಳಿಕ ಅದರ ವಾಸನೆಯು ಶ್ವಾಸಕೋಶದಿಂದಲೇ ಹೊರಹಾಕಲ್ಪಡುವುದರಿಂದ ಆಗಲೂ ಬಾಯಿಯ ದುರ್ವಾಸನೆಯು ಪ್ರಕಟಗೊಳ್ಳಬಹುದು. ಅಲ್ಪ ಪ್ರಮಾಣದಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ಹಲವು ದೈಹಿಕ ಕ್ರಿಯೆಗಳಿಗೆ ಅನುಕೂಲವಿದ್ದರೂ ಬೆಳ್ಳುಳ್ಳಿಯನ್ನು “ದುರ್ವಾಸನೆಯ ರಾಜ”ಯೆನ್ನದೇ ವಿಧಿಯಿಲ್ಲ. ವೈಜ್ಞಾನಿಕ ಸಂಶೋಧನೆಯಂತೆ ಬೆಳ್ಳುಳ್ಳಿಯನ್ನು ಪಾದಗಳಿಗೆ ಉಜ್ಜಿದರೂ ಅದು ಶ್ವಾಸದಲ್ಲಿ ಕಾಣಿಸುತ್ತದೆ.

ಎಂಜಲು ಎಂಬ ಏಂಜಲ್ :
ಬಾಯಿಯ ದುರ್ವಾಸನೆಯನ್ನು ದೂರವಿಡುವ ನಿಟ್ಟಿನಲ್ಲಿ ದೇವದೂತನಂತೆ ಗುಣಾತ್ಮಕ ಕೆಲಸವನ್ನು ನಿರ್ವಹಿಸುವುದು- ಎಂಜಲು. ಹಲ್ಲಿನ ಚಡಿಯಲ್ಲಿ ಸಿಕ್ಕಿಕೊಂಡ ಆಹಾರ ಕಣಗಳು ಮತ್ತು ವೈರಾಣುಗಳು ರಾತ್ರಿ ಹೊತ್ತಿನಲ್ಲಿ ಸಲೀಸಾಗಿ ಬೆಳೆಯುತ್ತವೆ. ನಿದ್ರೆಯ ಹೊತ್ತಿನಲ್ಲಿ ಎಂಜಲಿನ ಗ್ರಂಥಿಗಳ ಕಾರ್ಯಕ್ಷಮತೆಯೂ ಕುಂಠಿತಗೊಳ್ಳುವುದರಿಂದ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ಮಲಗುವ ಮುಂಚೆ ಕಡ್ಡಾಯವಾಗಿ ಬಾಯನ್ನು ಸ್ವಚ್ಛಗೊಳಿಸಲೇಬೇಕು. ಮಾತ್ರವಲ್ಲ, ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ಆಹಾರ ಸೇವಿಸ ಬೇಕು. Bed Coffee ಎಂಬ ಫ್ಯಾಶನ್‌ನಿಂದ ನಿಶ್ಚಿತವಾಗಿಯೂ ಆರೋಗ್ಯ ಹಾಳು.

ಉಪೇಕ್ಷೆಗೆ ಒಳಗಾದ ಬಾಯಿ

ದೀರ್ಘಾವಧಿಯ ಹಸಿವು ಹಾಗೂ ದೀರ್ಘ ಉಪವಾಸದಿಂದ ಬಾಯಿಯು ಒಣಗಿ ದುರ್ವಾಸನೆಗೆ ಕಾರಣವಾಗಬಹುದಾದ್ದರಿಂದ ದೀರ್ಘಕಾಲದ ನಿರಾಹಾರವು ಒಳ್ಳೆಯದಲ್ಲ.


ಉಪಶಮನ ಹೇಗೆ?

ಬಾಯಿಯ ಸರ್ವಾಂಗ ಸ್ವಚ್ಛತೆ- ಬೆಳಿಗ್ಗೆ ಮತ್ತು ರಾತ್ರಿ ಕ್ರಮವಾಗಿ ಎರಡು ಬಾರಿ ಹಲ್ಲುಜ್ಜುವುದರ ಜೊತೆಗೆ ಪ್ರತೀ ಆಹಾರ ಸೇವನೆಯ ನಂತರವೂ ಹಲ್ಲುಜ್ಜಿದರೆ ಅತ್ಯುತ್ತಮ. ನಿಮ್ಮ ದಂತ ವೈದ್ಯರು ನೀಡುವ ಔಷಧೀಯ Mouthwash ಮತ್ತು Flossing ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯದು.(ಬಳಕೆಯ ವಿಧಾನವನ್ನು ದಂತ ವೈದ್ಯರಿಂದ ತಿಳಿದುಕೊಂಡೇ ಬಳಸಿ).
ನಾಲಗೆಯನ್ನು ಪ್ರತೀ ಬಾರಿ ಹಲ್ಲುಜ್ಜುವಾಗಲೂ Toothbrush/tongue cleanerನಿಂದ ಉಜ್ಜಿ ಶುಚಿಯಾಗಿಡಿ.
ಆಗಾಗ ನೀರು ಕುಡಿದು ಬಾಯಿ ತೇವವಾಗಿರುವಂತೆ ನೋಡಿಕೊಳ್ಳಿ. ಸಕ್ಕರೆರಹಿತ chewing gum ನ ಮಿತ ಬಳಕೆಯಿಂದ ಅನುಕೂಲವಿದೆ. ದುರ್ವಾಸನೆ ಹೊಮ್ಮಿಸುವ ನೀರುಳ್ಳಿ/ಬೆಳ್ಳಿಳ್ಳಿ ಸೇವನೆಯನ್ನು ಮಿತಗೊಳಿಸಿ. ಕೃತಕ ದಂತ ಪಂಕ್ತಿ ಉಪಯೋಗಿಸುತ್ತಿದ್ದಲ್ಲಿ ಧರಿಸುವ ಮುನ್ನ ದಿನವೂ ಸ್ವಚ್ಛಗೊಳಿಸಿ. ನಿಯಮಿತವಾಗಿ ನಿಮ್ಮ ದಂತ ವೈದ್ಯರನ್ನು ಭೇಟಿಯಾಗಿ.


ಅಸ್ವಚ್ಛ ಬಾಯಿ

ಬಾಯಿಯ ಸ್ವಚ್ಛತೆ ಹಾಗೂ ದುರ್ವಾಸನೆಗೆ ಕಾರಣವಾಗಬಹುದಾದ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಶೀಘ್ರವಾಗಿ ಪತ್ತೆ ಹಚ್ಚಿದರೆ ಸಂಭಾವ್ಯ ಸಂಕಟಗಳನ್ನು ಆರಂಭದಲ್ಲೇ ತಡೆಯಬಹುದು. ಅಗತ್ಯ ಬಿದ್ದರೆ ಸಂಬಂಧಿಸಿದ ತಜ್ಞ ವೈದ್ಯರನ್ನು ಸಂದರ್ಶಿಸುವಂತೆ ನಿಮ್ಮ ದಂತ ವೈದ್ಯರೇ ಸೂಚಿಸಬಹುದು. ಬಾಯಿಯೆಂದರೆ ದೇಹವೆಂಬ ಸಾಮ್ರಾಜ್ಯದ ಕೋಟೆಬಾಗಿಲು. ಕೋಟೆಯ ಬಾಗಿಲು ದುರ್ಬಲವಾಗಿದ್ದರೆ ಅಥವಾ ಸುಸ್ಥಿತಿಯಲ್ಲಿರದಿದ್ದರೆ ವೈರಿಗಳು ಒಳನುಗ್ಗುವುದು ಅತಿ ಸುಲಭ. ಅನಾರೋಗ್ಯದ ಗೂಡಾಗಿರುವ ಬಾಯಿಂದ ಅಮೃತಾನ್ನವುಂಡರೂ ಅದು ದೇಹ ಸೇರುವುದು ವಿಷವಾಗಿಯೇ. ಆದುದರಿಂದ ಬಾಯಿ- ಹಲ್ಲುಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಅಪೇಕ್ಷಣೀಯ ಮತ್ತು ಅನಿವಾರ್ಯ.


ಡಾ.ರೋಹಿತ್.ಎನ್.ಡಿ
ಚೈತನ್ಯ ಸ್ಪೆಷ್ಯಾಲಿಟಿ ದಂತ ಚಿಕಿತ್ಸಾಲಯ

ಯೆಯ್ಯಾಡಿ, ಮಂಗಳೂರು
0824-2224222










Sunday, 10 May 2009

ಬಾಯಿ ಬಿಡಿಸಿದರೆ ಬಣ್ಣ ಬಯಲು

ಭಾರತ ದೇಶದಲ್ಲಿ ಹಲವು ಪ್ರಗತಿಪರ ಬದಲಾವಣೆಗಳಾಗುತ್ತಿದ್ದರೂ ದಂತರಕ್ಷಣೆ ಮತ್ತು ಚಿಕಿತ್ಸೆಯ ಬಗ್ಗೆ ಇನ್ನೂ ಅರಿವು ಕಡಿಮೆಯೇ. ವಯಸ್ಸಾದಂತೆ ಹಲ್ಲುಗಳ ಸಮಸ್ಯೆ ಮತ್ತು ಹಲ್ಲು ಉದುರಿಹೋಗುವುದು ಸಹಜವೆಂಬ ತಪ್ಪು ಕಲ್ಪನೆಯನ್ನೇ ಇನ್ನೊ ನಾವು ನೆಚ್ಚಿಕೊಂಡಿದ್ದೇವೆ. ಅದು ಸರಿಯಲ್ಲ. ವಯಸ್ಸಾದಂತೆ ದೇಹದ ಬೇರೆ ಯಾವ ಭಾಗವೂ ಉದುರಿಹೋಗುವುದಿಲ್ಲ;ಹಾಗೇ ಹಲ್ಲುಗಳೂ ಉದುರಿಹೋಗಲು ಇರುವಂಥದ್ದಲ್ಲ. ನೀಡುವ ಕಾಳಜಿ ಮಾಡುವ ಸ್ವಚ್ಛತೆ ಮತ್ತು ಸಮಾನ ಪ್ರಾಮುಖ್ಯತೆ ನೀಡದಿರುವುದರಿಂದಲೇ ವಯಸ್ಸಾದಂತೆ ಹಲ್ಲುಗಳ ಸಮಸ್ಯೆ ಕಾಡುತ್ತದೆ.ಅಂದು ಒಬ್ಬ ಮಧ್ಯ ವಯಸ್ಕ ಸ್ತ್ರೀ ನನ್ನೊಡನೆ ಹೇಳುತ್ತಿದ್ದರು. “ಡಾಕ್ಟ್ರೇ,ಬಾಯಲ್ಲಿ ಜೊಲ್ಲು ರಸವೇ ಬತ್ತಿ ಹೋದಂತೆ ಅನ್ನಿಸುತ್ತದೆ. ತುಟಿಗಳು ಒಂದನ್ನೊಂದು ಅಂಟಿಕೊಳ್ಳುತ್ತವೆ. ಮಾತನಾಡುವಾಗ ನಾಲಗೆಯನ್ನು ಕಿತ್ತು ತೆಗೆದಂತಹ ಅನುಭವ. ಮಾತೂಬೇಡ,ತಿನ್ನುವುದೂ ಬೇಡ ಅನ್ನಿಸುತ್ತದೆ.ಏನು ತಿಂದರೂ ಸುಖವೆನ್ನಿಸುವುದಿಲ್ಲ. ನನ್ನ ಸಮಸ್ಯೆ ಏನು?”  ಆಕೆಯನ್ನು ಪರೀಕ್ಷಿಸಿದೆ.

ಆಕೆಯ ಬಾಯಿಯೆಂಬುದು ಅವರ ದೇಹದ ಒಂದು ಉಪೇಕ್ಷಿತ ಅಂಗದಂತೆ ಇತ್ತು.ದವಡೆಯ ಎರಡೂ ಬದಿಯಲ್ಲಿ ಒಂದೆರಡು ಹಲ್ಲುಗಳು ಉದುರಿಯಾಗಿತ್ತು.ಕೆಳ ದವಡೆಯ ಆ ಖಾಲಿ ಜಾಗಕ್ಕೆ ಮೇಲಿನ ಹಲ್ಲುಗಳು ನಿಧಾನವಾಗಿ ಇಳಿಯುತ್ತಿದ್ದವು.ಇದರಿಂದಾಗಿ ಮೇಲ್ದವಡೆಯ ಹಲ್ಲುಗಳೂ ಸಡಿಲವಾಗುತ್ತಿದ್ದವು.ಎಲ್ಲ ಹಲ್ಲುಗಳಲ್ಲೂ TARTAR ಅಂಟಿಕೊಂಡಿತ್ತು.ಆಕೆಯ ಸಮಸ್ಯೆಗೆ ಶುಚಿತ್ವವಿಲ್ಲದ ಬಾಯಿ ಮತ್ತು ಹಲ್ಲುಗಳೇ ಮುಖ್ಯ ಕಾರಣವೆಂಬಂತೆ ಮೇಲ್ನೋಟಕ್ಕೆ ಕಾಣುತ್ತಿತ್ತು.

“ ನೀವು ಬೇರೆ ಯಾವುದಾದರೂ ದೈಹಿಕ ಸಮಸ್ಯೆಗೆ ಔಷಧ ಸೇವಿಸುತ್ತಿದ್ದೀರಾ?” ಎಂದೆ.
“ಇಲ್ಲ.ಬೇರೆ ಯಾವ ಸಮಸ್ಯೆಯೂ ಇಲ್ಲ”ಎಂದರು.
“ನಿಮ್ಮ ಕುಟುಂಬ ವೈದ್ಯರನ್ನು ನೋಡಿದ್ದೀರಾ?”
“ಹೌದು.ಅವರೇ ದಂತವೈದ್ಯರನ್ನು ಕಾಣಲು ಸೂಚಿಸಿದರು.”
ಅನಂತರ ಆಕೆಯ ಬಾಯಿಯನ್ನು ಆಮೂಲಾಗ್ರ ಪರೀಕ್ಷಿಸಿದೆ.
ಆಕೆಯ ಸಮಸ್ಯೆ ಅರ್ಥವಾಗತೊಡಗಿತು.
ಅದು DRY MOUTH (ಒಣಗಿದ ಬಾಯಿ) ಲಕ್ಷಣಗಳು.


ಏನಿದು DRY MOUTH??

ವಯಸ್ಸಾದಂತೆ ಹೆಚ್ಚಾಗಿ ಕಾಣಿಸುವ ಸಮಸ್ಯೆ ಇದು.ಹಸಿ ಹಸಿಯಾದ ಯೌವ್ವನ ಜಾರಿದಂತೆ,ಕೇವಲ ಬಾಯಿ ಮಾತ್ರವಲ್ಲ,ಇಡೀ ದೇಹವೇ ಒಂದಿಷ್ಟು ಬಾಡಿದಂತೆ, ನೀರಸವಾದಂತಹ ಅನುಭವವು ಸಹಜ.
DRY MOUTH ಎಂದರೆ ಬಾಯಲ್ಲಿ ಸಾಕಷ್ಟು ಜೊಲ್ಲುರಸ ಅಥವ ಎಂಜಲು ಇಲ್ಲದ,ಬಾಯನ್ನು ಹಸಿಯಾಗಿರಿಸುವ ತೇವರಹಿತ ಸ್ಥಿತಿ.
ಒಣ ಬಾಯಿಯ ಲಕ್ಷಣಗಳು:
ಬಾಯಿ-ತುಟಿಯ ಒಳಗಿನ ಭಾಗಗಳು ಒಣಗಿದ ಮತ್ತು ಅಂಟಿಕೊಳ್ಳುವ ಅನುಭವ.
ಜಗಿಯುವುದಕ್ಕೆ,ನುಂಗಲು,ರುಚಿನೋಡಲು,ಮಾತನಾಡಲು ಕಿರಿಕಿರಿ.
ಬಾಯೊಳಗೆ ಉರಿಯುವ ಅನುಭವ.
ಒಡೆದ ತುಟಿಗಳು
ಒಣಗಿದ ದೊರಗು ನಾಲಿಗೆ
ಬಾಯಿ ಹುಣ್ನು
ಬಾಯಿಯಲ್ಲಿ ಸೋಂಕು(INFECTION)

ಜೊಲ್ಲುರಸವು ಏಕೆ ಬೇಕು?

ತಿಂದ ಆಹಾರವು ಜೀರ್ಣವಾಗಲು
ಹಲ್ಲುಗಳು ಸವೆದು ನಷ್ಟವಾಗದಿರಲು
ಬಾಯಿಯಲ್ಲಿರುವ ರೋಗಾಣುಗಳಿಂದ ಸೋಂಕು ತಗಲದಿರಲು
ಆಹಾರವನ್ನು ಜಗಿದು ನುಂಗಲು


ಒಣ ಬಾಯಿಗೆ ಕಾರಣಗಳೇನು? ಒಣ ಬಾಯಿಗೆ ಕಾರಣಗಳೇನು?

ಸುಮಾರು ನಾನೂರಕ್ಕೂ ಮಿಕ್ಕಿದ ಬೇರೆ ಬೇರೆ ಔಷಧಗಳು ಜೊಲ್ಲು ರಸದ ಗ್ರಂಥಿಗಳ(salivary glands) ಸ್ರವಿಸುವಿಕೆಯನ್ನು ಕುಗ್ಗಿಸುತ್ತವೆ. ದೇಹದ ಬೇರೆ ಬೇರೆ ಸಮಸ್ಯೆಗಳಿಗಾಗಿ ಸೇವಿಸುವ ಔಷಧಗಳ ಪರಿಣಾಮವಿದು. HIV/AIDS, ಸಿಹಿಮೂತ್ರ, parkinson ರೋಗಗಳಿಗೆ ತುತ್ತಾದವರಿಗೆ ಈ ಬಗೆಯ ಶುಷ್ಕ ಸ್ಥಿತಿ ಬರಬಹುದು. ಕ್ಯಾನ್ಸರ್ ಚಿಕಿತ್ಸೆಗೆ(RADIATION THERAPY) ಒಳಗಾದವರಿಗೆ ಒಣ ಬಾಯಿಯ ಸಾಧ್ಯತೆ ಇದೆ. CHEMOTHERAPY ಗೆ ಒಳಗಾಗಿ ಕ್ಯಾನ್ಸರಿಗೆ ಸಂಬಂಧಿಸಿದ ಔಷಧವನ್ನು ಸೇವಿಸುವವರಿಗೆ ಜೊಲ್ಲುರಸವು ದಪ್ಪವಾಗಿ ಬಾಯಿ ಒಣಗಿದ ಅನುಭವವಾಗುತ್ತದೆ. ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ತೀವ್ರವಾದ ಹಾನಿಯಾದಾಗ ನರಗಳಿಗೆ ಹಾನಿಯಾದಾಗ ನರಗಳಿಗೂ ಹಾನಿಯಾಗಿ,ಆ ನೋವನ್ನು ಜೊಲ್ಲುರಸ ಗ್ರಂಥಿಗಳು ಪ್ರಕಟಪಡಿಸುವ ರೀತಿಯೂ ಇದಾಗಿರಬಹುದು.

ಪರಿಹಾರವೇನು?

ತಕ್ಷಣವೇ ನಿಮ್ಮ ದಂತ ವೈದ್ಯರು ಅಥವ ಫಿಸೀಶಿಯನ್ನರನ್ನು ಭೇಟಿ ಮಾಡಿ.ವೈದ್ಯರು ನಿಮ್ಮ ಸಮಸ್ಯೆಯನ್ನು ತಿಳಿದು ತಕ್ಕ ಔಷಧೋಪಚಾರ ಆರಂಭಿಸುತ್ತಾರೆ. ನೀರು ಅಥವಾ ಸಕ್ಕರೆ ರಹಿತ ದ್ರವರೂಪೀ ಆಹಾರವನ್ನು ಪದೇಪದೇ ಸೇವಿಸಿ.
ಕಾಫಿ, ಚಹ, ಸೋಡ, ಹೊಗೆಸೊಪ್ಪು, ಮದ್ಯಪಾನ - ವರ್ಜ್ಯ ಮಸಾಲೆಯುಕ್ತ ಲವಣ ಮಿಶ್ರಿತ ಆಹಾರವು ಹಿತಕರವಲ್ಲ.

ವಹಿಸಬೇಕಾದ ಎಚ್ಚರ:

ದಿನಕ್ಕೆರಡು ಬಾರಿಯಾದರೂ ಮೃದುವಾಗಿ ಹಲ್ಲುಗಳನ್ನು ತಿಕ್ಕಿ ತೊಳೆಯಿರಿ.
ಹಲ್ಲುಗಳ ಎಡೆಯನ್ನು ದಂತ ದಾರ(FLOSS)ದಿಂದ ಶುಚಿಗೊಳಿಸಿ.
FLOURIDEಯುಕ್ತ toothpaste ನ್ನೇ ಬಳಸಿ.
ಸಿಹಿ ಸೇವನೆಯು ಮಿತಿಯಲ್ಲಿರಲಿ. ಸೇವಿಸಿದರೆ, ತಕ್ಷಣವೇ ಹಲ್ಲುಗಳನ್ನು ಶುಚಿಗೊಳಿಸಿ.
ವರ್ಷಕ್ಕೆ 2 ಬಾರಿಯಾದರೂ ದಂತ ವೈದ್ಯರನ್ನು ಕಂಡು CHECK- UP ಮಾಡಿಸಿಕೊಳ್ಳಿ.
ಬದುಕನ್ನು ಸಹನೀಯವಾಗಿಸುವ ಮತ್ತು ಸ್ಮರಣೀಯವಾಗಿಸುವ ಬಾಯಿ ಮತ್ತು ಹಲ್ಲುಗಳನ್ನು ಅಕ್ಕರಾಸ್ಥೆಯಿಂದ ರಕ್ಷಿಸಿಕೊಳ್ಳುವ ಕರ್ತವ್ಯ ನಮ್ಮದು.ಬೆಳೆಯುವ ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಜಾಣತನವಂತೆ.ಕನಿಷ್ಠ ಎಚ್ಚರವೂ ದೀರ್ಘ ನೆಮ್ಮದಿಗೆ ಕಾರಣವಾಗುವುದಿದೆ.

ನೆನಪಿಡಿ:

ದೇಹಕ್ಕೆ ಇರುವಷ್ಟೇ ಆಯುಷ್ಯ - ಹಲ್ಲುಗಳಿಗೂ ಇದೆ.
ದೇಹದ ಅವಿನಾಭಾಗ - ನಮ್ಮ ದಂತಪಂಙ್ತಿ.
ಒಂದೊಂದು ಹಲ್ಲಿನ ನಷ್ಟವೆಂದರೆ ದೇಹಕ್ಕೊದಗಿದ ಊನ.
ಚಿಕ್ಕ ಸಮಸ್ಯೆಯೆಂದು ಕಡೆಗಣಿಸಿ, ನಿರ್ಲಕ್ಷ್ಯದಿಂದ ಹಲ್ಲುಗಳನ್ನು ಕಳೆದುಕೊಳ್ಳಬೇಡಿ
ತಾತ್ಕಾಲಿಕ ಲಾಭಕ್ಕಾಗಿ ದೀರ್ಘಕಾಲೀನ ತೊಂದರೆ ತಂದುಕೊಳ್ಲುವುದು ದಡ್ಡತನ.
ಹಲ್ಲಿನ ಸಮಸ್ಯೆಗಳಿಗೆ ದಂತ ವೈದ್ಯರಿಂದ ಮಾತ್ರ ಪರಿಹಾರ ಸಾಧ್ಯ.

ಆಧುನಿಕ ದಂತ ವೈದ್ಯ ಶಾಸ್ತ್ರವು ಅಗಾಧವಾಗಿ ಬೆಳೆದಿದೆ.ಅದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮಾಜಿಕ ಎಚ್ಚರ ಮಾತ್ರ- ಇಂದಿನ ಅಗತ್ಯ. ನನ್ನೆದುರು ತಲೆತಗ್ಗಿಸಿ ಕುಳಿತ ಸ್ತ್ರೀ ಕಣ್ಣೊರೆಸಿಕೊಂಡರು.................... ಆಕೆಯ ಕುಟುಂಬ ವೈದ್ಯರ ಕಡೆಯಿಂದ ಸಮಗ್ರ ದೇಹ ಸ್ಥಿತಿಯ ಬಗ್ಗೆ ವಿವರ ಮತ್ತು ದಂತ ಚಿಕಿತ್ಸೆಗೆ ಒಪ್ಪಿಗೆ ದೊರೆತ ತಕ್ಷ್ರಣ ಸೂಕ್ತ ದಂತ ಚಿಕಿತ್ಸೆಗೆ ಯಾವುದೇಅಡ್ಡಿಯಿಲ್ಲ ಎಂದು ಸಂತೈಸಿದೆ. ಯಾಕೆಂದರೆ ಆಕೆಗಿತ್ತು HIV/AIDS.

ಡಾ. ರೋಹಿತ್.ಎನ್.ಡಿ
ಚೈತನ್ಯ ಸ್ಪೆಷಾಲಿಟಿ ದಂತ ಚಿಕಿತ್ಸಾಲಯ
ಯೆಯ್ಯಾಡಿ, ಮಂಗಳೂರು
Ph: 2224222